ಪ್ರಾಣಿಸಾರಕಗಳು

ಪ್ರಾಣಿಮೂಲ ಕಚ್ಚಾ ಪದಾರ್ಥಗಳೊಳಗೆ ಇರುವ ಮುಖ್ಯವಾದ ಹಾಗೂ ಅತಿಚಟುವಟಿಕೆಯುಳ್ಳ ಅಂಶಗಳನ್ನು ವಿಶಿಷ್ಟಕ್ರಮಗಳಿಂದ ಹೊರಕ್ಕೆ ತೆಗೆದು ಮಾಡಿದ ತಯಾರಿಕೆಗಳು. ಈ ಕಚ್ಚಾ ಪದಾರ್ಥಗಳನ್ನು ಸಣ್ಣಗೆ ಮಾಡಿ ನೀರು ಅಥವಾ ಮದ್ಯಸಾರದಲ್ಲಿ ನೆನೆಹಾಕಿ ಆಮೇಲೆ ಆ ಮಿಶ್ರಣವನ್ನು ಶೋಧಿಸಿ ಸಾರಕಗಳನ್ನು ತಯಾರಿಸುವುದಿದೆ. ಸಾರಕಗಳಲ್ಲಿ ಮೂರುಬಗೆಗಳಿವೆ : 1 ಜಲಾಂಶವಿಲ್ಲದೆ ಒಣಗಿ ಗಟ್ಟಿಯಾಗಿರುವ ಸಾರಕ, 2 ದ್ರವಸಾರಕ, 3 ಮೃದು ಸಾರಕ. 

	ಒಣಗಿದ ಸಾರಕಗಳನ್ನು ಮಾಡುವ ರೀತಿ : ಮೊದಲು ದ್ರವಸಾರಕವನ್ನು ತಯಾರಿಸಿ ಅದನ್ನು ಒತ್ತಡದ ಸಹಾಯದಿಂದ ಲೀನಕಾರಿ ಪದಾರ್ಥವನ್ನು ಇಂಗಿಸಿ ಗಟ್ಟಿಮಾಡಬೇಕು. ಇದನ್ನು ವಿಶೇಷ ಔಷಧ ಚಟುವಟಿಕೆ ಏನೂ ಇಲ್ಲದ ಲ್ಯಾಕ್ಟೋಸ್ ಅಥವಾ ಹಿಟ್ಟು ಪಿಷ್ಟಗಳೊಡನೆ ಮಿಶ್ರಿಸಬೇಕು; 1 ಮಿಲೀ ದ್ರವ ಸಾರಕದಲ್ಲಿರುವ ಚಟುವಟಿಕೆ 1 ಗ್ರಾಮ್ ಒಣಗಿದ ಸಾರಕದ ಚಟುವಟಿಕೆಗೆ ಸಮವಾಗಿರುವಂತೆ ಪ್ರಮಾಣ ನಿಗದಿ ಮಾಡಬೇಕು. ಉದಾಹರಣೆಗೆ ಥೈರಾಯಿಡ್ ಸಾರಕ ಗೋರೋಚನ ಮತ್ತು ಪಿಟುಯಿಟರಿ ಸಾರಕ. ಈ ಗಟ್ಟಿ ಸಾರಕ ಆದ್ರ್ರ ವಸ್ತುವಾಗಿದ್ದರೆ ಆಗ ಸುಣ್ಣದ ಫಾಸ್ಫೇಟ್ ಬೆರೆಸಿ ಪ್ರಮಾಣ ನಿಗದಿ ಮಾಡಬೇಕು. ಇದನ್ನು ಗಾಳಿಯಾಡದ ಧಾರಕಗಳಲ್ಲಿ ಮುಚ್ಚಿಟ್ಟಿರಬೇಕು.

	ದ್ರವಸಾರಕಗಳು : ಕಚ್ಚಾವಸ್ತುಗಳನ್ನು ನೀರು ಅಥವಾ ಮದ್ಯಸಾರದೊಡನೆ ಮಿಶ್ರಿಸಿ ಸಾರೀಕರಣ ಮಾಡಿದ ತಯಾರಿಕೆಗಳಿಗೆ ದ್ರವಸಾರಕಗಳೆಂದು ಹೆಸರು. 1 ಭಾಗ ದ್ರವಸಾರಕದ ಚಟುವಟಿಕೆ ಗೊತ್ತಾದ 1 ಭಾಗ ತೂಕದ ಗಟ್ಟಿ ಕಚ್ಚಾವಸ್ತುವಿನ ಚಟುವಟಿಕೆಗೆ ಸರಿಸಮವಾಗಿರುವಂತೆ ಮಾಡಿ ಪ್ರಮಾಣ ನಿಗದಿ ಮಾಡಬೇಕು. ಉದಾಹರಣೆ : ಇನ್ಸುಲಿನ್, ಜಠರ ಸಾರಕಗಳು. ಯಕೃತ್ ಸಾರಕಗಳು.

	ಮೃದುಸಾರಕವೆಂದರೆ ಲೀನಿಸುವ ದ್ರವವನ್ನು ಅದಷ್ಟು ಇಂಗಿಸಿ ಮೃದುವಾದ ಒಂದು ಮುದ್ದೆಯಾಗುವಂತೆ ಮಾಡಿದ ತಯಾರಿಕೆ. ಇದನ್ನು ಮಾಡುವುದರಿಂದ ಉಂಟಾಗುವ ಅನುಕೂಲತೆಗಳಿವು : (i) ಮುದ್ದೆ ಮಾಡುವಾಗ ಮೃದುತ್ವದಲ್ಲಿ ಅನೇಕ ರೀತಿಗಳಿಂದ ವ್ಯತ್ಯಾಸಗಳಾಗಬಹುದು; (ii) ಇವುಗಳ ಪ್ರಮಾಣ ನಿಗದಿ ಮಾಡುವುದು ಕಷ್ಟ; (iii) ಇವನ್ನು ತಿಳಿಮಾಡುವ ದ್ರವ ವಸ್ತುವನ್ನು ಪಡೆಯುವುದು ಕಠಿಣ; (iv) ಈ ಮೃದು ಸಾರಕಗಳನ್ನು ಬಹಳ ದಿನಗಳ ತನಕ ಸಂಗ್ರಹಿಸಿಡುವುದರಿಂದ ಇವು ಗಟ್ಟಿಯಾಗಿ ಮದ್ದು ಮಾಡಿಕೊಡಲು ದುಸ್ತರವಾಗಬಹುದು.

	ಪ್ರಾಣಿಸಾರಕಗಳನ್ನು ಬಹಳ ಹಿಂದಿನಿಂದಲೂ ಉಪಯೋಗಿಸುತ್ತಿರುವರು. ಜಠರದ ಮತ್ತು ಯಕೃತ್ ಸಾರಕಗಳನ್ನು ರಕ್ತಕೊರತೆ ಮತ್ತು ದುರ್ಬಲತೆಗೆ ಕೊಡುತ್ತಾರೆ. ಅದೇ ರೀತಿ ಇನ್ಸುಲಿನ್ನನ್ನು ಮಧುಮೇಹದಲ್ಲಿ ಚುಚ್ಚಿ ಶರೀರಕ್ಕೆ ಸೇರಿಸುತ್ತಾರೆ. ಹೈಪೊತೈರಾಯ್ಡಿಸಮಿನಲ್ಲಿ ತೈರಾಯಿಡ್ ಸಾರಕವನ್ನು ಉಪಯೋಗಿಸುತ್ತಾರೆ. ಹಾರ್ಮೋನುಗಳನ್ನು ಇವುಗಳ ಕೊರತೆಯಲ್ಲಿ ಉಪಯೋಗಿಸುತ್ತಾರೆ. 

ಪ್ರಾಣಿಸಾರಕಗಳನ್ನು ಸಾಮಾನ್ಯವಾಗಿ ಹಂದಿ ಮತ್ತು ದನಗಳಿಂದ ತಯಾರಿಸುತ್ತಾರೆ. ಕೆಲವು ವೇಳೆ ಪ್ರಯೋಗಶಾಲೆಯಲ್ಲಿ ಪೂರ್ಣವಾಗಿ, ಇಲ್ಲವೆ ಭಾಗಶಃ, ರಾಸಾಯನಿಕವಾಗಿ ಸಂಶ್ಲೇಷಿಸುವುದೂ ಉಂಟು. ಯಕೃತ್ ದ್ರವಸಾರಕವನ್ನು ಮ್ಯಾಕ್ರೊಸೈಟಿಕ್ ರಕ್ತಹೀನತೆಯಲ್ಲಿ ಉಪಯೋಗಿಸುತ್ತಾರೆ. ಇದರಲ್ಲಿ ಸೈನಕೊ ಬಾಲಮಿನ್ ಫೋಲಿಕ್ ಆಮ್ಲ ಮುಂತಾದ ಜೀವಸತ್ತ್ವಗಳಿವೆ. ಬಿ ಗುಂಪಿಗೆ ಸೇರಿದ ಯಕೃತ್ ಸಾರಕದಿಂದ ಅನೇಕ ಅಡ್ಡ ಪರಿಣಾಮಗಳು ಉಂಟಾಗಬಹುದು. ಆದ್ದರಿಂದ ವ್ಯಾಧಿತೀರ್ಮಾನಕ್ಕೆ ಮುಂಚೆ ಇದನ್ನು ಕೊಡಬಾರದು. ಯಕೃತ್ ಸಾರಕವನ್ನು ಗರ್ಭಿಣಿಯರ ರಕ್ತಕೊರತೆಯಲ್ಲಿಯೂ ಕೆಲವುವೇಳೆ ಅಗ್ರ್ಯಾನ್ಯೂಲೊಸೈ ಟೋಸಿಸಿನಲ್ಲಿಯೂ ಉಪಯೋಗಿಸುತ್ತಾರೆ. 

ಪಿತ್ತ : ಪ್ರಾಣಿಸಾರಕವಾಗಿ ಪಿತ್ತವನ್ನು ದನಕರುಗಳ ಯಕೃತ್ತಿನಿಂದ ತಯಾರಿಸುತ್ತಾರೆ. ಇದನ್ನು (1000 ಮಿಲೀ) ಮದ್ಯಸಾರದಲ್ಲಿ (250 ಮಿಲೀ) ಮಿಶ್ರಿಸಿ ಈ ಮಿಶ್ರಣವನ್ನು ಇಂಗಿಸಿ ಸ್ವಲ್ಪ ಕಾಲಾನಂತರ ಮೇಲಿನ ತಿಳಿಯನ್ನು ತೆಗೆದುಕೊಂಡು ಬತ್ತಿಸಿದರೆ ಉಳಿಯುವ ಗಟ್ಟಿಯಾದ ಸಾರಕವೇ ಪಿತ್ತಸಾರಕ. ಗೋರೋಚನ ಎನ್ನುವುದು ನೈಸರ್ಗಿಕ ಪಿತ್ತಸಾರಕ. ಪಿತ್ತಸಾರಕದಲ್ಲಿ ಸೋಡಿಯಮ್ ಗ್ಲೈಕೊಲೇಟ್ ಮತ್ತು ಸೋಡಿಯಮ್ ಟಾರೊ ಕೋಲೇಟ್ ಲವಣಗಳಿರುತ್ತವೆ. ಇವು ಅಂಗಕ್ರಿಯಾತ್ಮಕವಾಗಿಯೂ ಔಷಧಾತ್ಮಕವಾಗಿಯೂ ಕೆಲಸ ಮಾಡುತ್ತವೆ. ಈ ಲವಣಗಳು ಕೋಲಿಕ್ ಆಮ್ಲ ಮತ್ತು ಡೈಹೈಡ್ರೊಕೋಲಿಕ್ ಆಮ್ಲಗಳಿಂದ ಉಂಟಾದವು. ಜೀರ್ಣಾಂಗಗಳಿಂದ ಜಿಡ್ಡು ಮತ್ತು ಜಿಡ್ಡಿನಲ್ಲಿ ಲೀನಿಸುವ ಜೀವಸತ್ತ್ವಗಳು ಹೀರಲ್ಪಡುವುದಕ್ಕೆ ಪಿತ್ತ ಆವಶ್ಯಕ. ಪಿತ್ತಕ್ಕೆ ಸೌಮ್ಯ ವಿರೇಚನಗುಣ ಉಂಟು. ಇದರ ಲವಣಗಳನ್ನು ಅಭಿಧಮನಿ ಮೂಲಕ ಹೊಗಿಸಿದರೆ ನರಗಳ ಮತ್ತು ಹೃದಯದ ಚಟುವಟಿಕೆ ತಗ್ಗುತ್ತದೆ. ಈ ಲವಣಗಳು ರಕ್ತನಾಳಗಳ ಕ್ಷಯವನ್ನೂ ಉಂಟು ಮಾಡುತ್ತವೆ. ಸೋಂಕಿನಿಂದ ಯಕೃತ್ ಉರಿಯೂತವಾಗಿದ್ದಾಗ ಇದನ್ನು ಕೊಡುತ್ತಾರೆ. ಕರುಳಿನ ಚಲನೆಯನ್ನು ಹೆಚ್ಚಿಸಲು ಮತ್ತು ಮಲಬದ್ಧತೆ ಹೋಗಲಾಡಿಸಲು ಇದನ್ನು ಮಾತ್ರೆಗಳ ರೂಪದಲ್ಲಿ ಉಪಯೋಗಿಸುತ್ತಾರೆ. ಗರ್ಭಿಣಿಯರಲ್ಲಿ ಅವರ ಕಾಂತಿ ವೃದ್ಧಿಯಾಗಲೂ ಒಳಗೆ ಬೆಳೆಯುವ ಶಿಶು ಸರಿಯಾಗಿ ವೃದ್ಧಿಯಾಗಲೂ ಇದನ್ನು ಉಪಯೋಗಿಸುತ್ತಾರೆ. ಪಿತ್ತವನ್ನು ಬಸ್ತಿರೂಪವಾಗಿಯೂ ಬಿಸಿನೀರಿನಲ್ಲಿ ಬೆರೆಸಿ ಕೊಡಬಹುದು. ರಕ್ತಪರಿಚಲನೆಯ ಕಾಲವನ್ನು ತಿಳಿಯಲು ಪಿತ್ತದ ಉಪಯೋಗವಿದೆ. ಇದಕ್ಕೆ 5 ಮಿಲೀ ಪಿತ್ತರಸವನ್ನು ಅಭಿಧಮನಿ ಮೂಲಕ ಹೊಗಿಸಿದರೆ, ಹೀಗೆ ಹೊಗಿಸಿದ ಮುಹೂರ್ತದಿಂದ ಬಾಯಿಯಲ್ಲಿ ಕಹಿರುಚಿ ಬರುವ ತನಕ ರಕ್ತಪರಿಚಲನೆಯ ಕಾಲವೆಂದು ಅರಿಯಬಹುದು. ಸಾಮಾನ್ಯವಾಗಿ ಇದು 10-17 ಸೆಕೆಂಡುಗಳ ತನಕ ಇರುತ್ತದೆ.

	ಫ್ರೈಯರನ ಲೇಪ : ಸಾಂಬ್ರಾಣಿಯಿಂದ ಮಾಡಿದ ದ್ರಾವಕದಂಥ ಲೇಪ. ಇದರಲ್ಲಿ ಸಾಂಬ್ರಾಣಿ 100 ಗ್ರಾಮ್, ಸ್ಟೊರ್ಯಾಕ್ಸ್ 75 ಗ್ರಾಮ್, ಟೊಲು ಲೇಪ 25 ಗ್ರಾಮ್, ಲೋಳೆಸರದ ಸಾರಕ 20 ಗ್ರಾಮ್ ಮತ್ತು ಮದ್ಯಸಾರ 1000 ಮಿಲೀ ಇರುತ್ತವೆ. ಮೊದಲು ಸಾಂಬ್ರಾಣಿ, ಸ್ಟೊರ್ಯಾಕ್ಸ್, ಲೋಳಸರದ ಸಾರಕಗಳನ್ನು ಚೆನ್ನಾಗಿ ಪುಡಿಮಾಡಿ 800 ಮಿಲೀ ಮದ್ಯಸಾರದಲ್ಲಿ ಚೆನ್ನಾಗಿ ಅರೆದು ಅದಕ್ಕೆ ಟೊಲುದ್ರವ ಲೇಪ ಸೇರಿಸಿ ಎರಡು ದಿವಸಗಳ ತನಕ ಮುಚ್ಚಿಟ್ಟಿರಬೇಕು. ಆಮೇಲೆ ಅದನ್ನು ಶೋಧಿಸಿ ಮಿಕ್ಕ 200 ಮಿಲೀ ಮದ್ಯಸಾರವನ್ನು ಸೇರಿಸಿ ಒಟ್ಟು 1000 ಮಿಲೀಯಷ್ಟು ಮಾಡಬೇಕು. ಇದೇ ಫ್ರೆಯರ್ ಲೇಪ. ಇದರಲ್ಲಿರುವ ಸಾಂಬ್ರಾಣಿಯಲ್ಲಿ ಬೆನ್‍ಜೋಯಿಕ್ ಆಮ್ಲ, ರಾಳ ಮತ್ತು ಬಲುಬೇಗ ಆರಿ ಹೋಗುವ ಅವಿಶೀಲ ಎಣ್ಣೆಗಳು ಇವೆ. ಈ ಲೇಪವನ್ನು ಚರ್ಮಕ್ಕೆ ನಂಜುರೋಧಕವಾಗಿಯೂ ಅದರ ಹೆಚ್ಚುಸಾಂದ್ರತೆಯಲ್ಲಿ ಚರ್ಮದ ಚೋದಕವಾಗಿಯೂ ಉಪಯೋಗಿಸುತ್ತಾರೆ. ಸಾಂಬ್ರಾಣಿಯನ್ನು ಶರೀರದೊಳಗೆ ಸೇವಿಸಿದರೆ ದೇಹೋಷ್ಣತೆ ಕಡಿಮೆಯಾಗುತ್ತದೆ ಮತ್ತು ವಾಕರಿಕೆ ವಾಂತಿಗಳು ಅದರ ಚೋದಕ ಗುಣದಿಂದ ಉಂಟಾಗುತ್ತವೆ. ಇದು ಕೇಂದ್ರ ನರಮಂಡಲವನ್ನು ಚುರುಕುಗೊಳಿಸುತ್ತದೆ. ಪ್ರಾಯಶಃ ಸಾಂಬ್ರಾಣಿಯಿಂದ ಹಿಪ್ಪ್ಯೂರಿಕ್ ಆಮ್ಲ ಶರೀರದಲ್ಲಿ ಉತ್ಪತಿಯಾಗುವುದರಿಂದ ಇವು ತಲೆದೋರುವುದಾಗಿರಬಹುದು. ಫ್ರೈಯರನ ಲೇಪ ನಂಜುರೋಧಕವಾಗಿರುವುದರಿಂದ ಗಾಯಗಳು ಜಾಗ್ರತೆ ಮಾಯಲು ಅದನ್ನು ಗಾಯಗಳಿಗೆ ಲೇಪಿಸುವುದಿದೆ. ಕೊಬ್ಬು ವಾಸನೆ ಬಾರದಂತೆಯೂ ಅದು ಕೆಡದಂತೆಯೂ ಪರಿಪಾಲಿಸಲು ಈ ಲೇಪವನ್ನು ಉಪಯೋಗಮಾಡುತ್ತಾರೆ. ಇದನ್ನು ಬಿಸಿನೀರಿನೊಡನೆ ಸೇರಿಸಿ ಆವಿಮಾಡಿ ಮೂಗಿನ ಮೂಲಕ ಬ್ರಾಂಕೈಟಿಸ್, ಕೆಮ್ಮು, ಧ್ವನಿನಾಳದ ಉರಿತಗಳಲ್ಲಿ ಕಫ ಸೋರಕವಾಗಿ ಉಪಯೋಗಿಸುತ್ತಾರೆ. ಇದು ಬಹಳ ಪ್ರಯೋಜನಕಾರಿಯಾದ ದ್ರಾವಕ.
(ಎಸ್.ಕೆ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ